ನೀರುಕೋಳಿ -
	ರ್ಯಾಲಿಪಾರ್‍ರ್ಮಿಸ್ ವರ್ಗ ಮತ್ತು ರ್ಯಾಲಿಡಿ ಕುಟುಂಬಕ್ಕೆ ಸೇರಿದ ಪಕ್ಷಿ (ಮೂರ್‍ಹೆನ್). ಇದರಲ್ಲಿ ಭಾರತದ ನೀರುಕೋಳಿ ಮತ್ತು ಬಿಳಿ ಎದೆಯ ನೀರುಕೋಳಿ ಎಂಬ ಎರಡು ಮುಖ್ಯ ಬಗೆಗಳುಂಟು.

	ಬಿಳಿ ಎದೆಯ ನೀರುಕೋಳಿ ಆಕಾರದಲ್ಲಿ ಕೋಳಿಯಂತೆಯೇ ಇದೆ. ಇದರ ಮುಖ, ಕುತ್ತಿಗೆ ಮತ್ತು ಎದೆಯ ಭಾಗ ಬೆಳ್ಳಗಿವೆಯಾದರೆ, ರೆಕ್ಕೆಗಳು ಮತ್ತು ಹಿಂಭಾಗ ಕಂದು ಬಣ್ಣದವು. ಇದು ಜೌಗುಪ್ರದೇಶ, ಗದ್ದೆಗಳ ಅಂಚು ಮತ್ತು ಪೊದೆಗಳು ಬೆಳೆದಿರುವ ಸ್ಥಳಗಳನ್ನೇ ಇಷ್ಟಪಡುತ್ತದೆ. ದಿನವೆಲ್ಲ ಪೊದೆಗಳಲ್ಲಿ ಅಡಗಿದ್ದು ಬೆಳಗಿನ ಜಾವ ಮತ್ತು ಸಾಯಂಕಾಲ ಮಾತ್ರ ಹೊರಗೆ ಬಂದು ತನ್ನ ಆಹಾರವನ್ನು ಅರಸಿಕೊಂಡು ಓಡಾಡುತ್ತದೆ. ಸಾಮಾನ್ಯವಾಗಿ ಗುಂಪುಗಳಲ್ಲೆ ಇರುವುದು. ಕೀಟಗಳು, ಹುಳುಗಳು ಮತ್ತು ಕಾಳುಗಳು ಇದರ ಆಹಾರ. 

	ಸಂಭೋಗ ಕಾಲದಲ್ಲಿ ಒಡನಾಡಿಯನ್ನು ಆಕರ್ಷಿಸಲು ಗಂಡು ನೀರುಕೋಳಿ ಬಹಳ ಗಟ್ಟಿಯಾಗಿ ಕೂಗುತ್ತದೆ. ಮಳೆಗಾಲದ ಆರಂಭ ಇದರ ಸಂತಾನವೃದ್ಧಿಯ ಶ್ರಾಯ. ಇದು ನೀರ ಮೇಲೆ ತೇಲುವ ಗೂಡನ್ನು ರಚಿಸಬಲ್ಲದು. ಕೆಲವು ಸಲ ಚಿಕ್ಕ ಮರದ ಮೇಲೆ ಅಥವಾ ಪೊದೆಗಳಲ್ಲಿ ಗೂಡನ್ನು ರಚಿಸುವುದುಂಟು. ಸಾಮಾನ್ಯವಾಗಿ ಒಂದು ಸಲಕ್ಕೆ 4-7 ಮೊಟ್ಟೆಗಳನ್ನಿಡುವುದು. ಮೊಟ್ಟೆಗಳ ಬಣ್ಣ ಕೆನೆಯಂತೆ. ಅಲ್ಲಲ್ಲಿ ಕಂದುಬಣ್ಣದ ಕಲೆಗಳಿವೆ. ಇದು ಶ್ರೀಲಂಕಾದ ನಿವಾಸಿ.

	ಭಾರತದ ನೀರುಕೋಳಿ ನೋಡಲು ಬಿಳಿ ಎದೆಯ ನೀರುಕೋಳಿಯಂತೆಯೇ ಇದೆ. ಭಾರತಾದ್ಯಂತ ಇದರ ವ್ಯಾಪ್ತಿಯುಂಟು. ಇದರ ಬೆನ್ನುಭಾಗ ಕಪ್ಪು ಹಾಗೂ ಹಸಿರು ಬಣ್ಣಗಳ ಮಿಶ್ರಣ. ಒಂದು ಪಾಶ್ರ್ವದಲ್ಲಿ ಉದ್ದವಾದ ಬಿಳಿಪಟ್ಟಿ ಇದೆ. ಪುಕ್ಕದ ಕೆಳಭಾಗ ಬಿಳಿ. ಕಪ್ಪು ಪಟ್ಟಿಯೊಂದು ಇದನ್ನು ಎರಡು ಭಾಗವನ್ನಾಗಿ ಮಾಡಿದರೆ, ನೀರು ಕೋಳಿಯ ಕೊಕ್ಕಿನತುದಿ ಹಳದಿ, ಉಳಿದ ಭಾಗ ಕಡುಗೆಂಪು ಬಣ್ಣದ್ದು. ಹಣೆಯ ಮೇಲೆ ಅಗಲವಾದ ಬಣ್ಣದ ಕೊಂಬುಂಟು.

	ಭಾರತದ ನೀರುಕೋಳಿ ಜೋಡಿಗಳಲ್ಲಿ ಅಥವಾ ಗುಂಪುಗಳಲ್ಲಿ ಕೆರೆ, ಸರೋವರಗಳಲ್ಲಿ ಕಂಡುಬರುತ್ತದೆ. ನೀರುಕೋಳಿ ತನ್ನ ತಲೆಯನ್ನು ಅಲ್ಲಾಡಿಸುತ್ತ ನೀರಿನಲ್ಲಿ ಈಜುತ್ತಿದ್ದರೆ, ದೂರದಿಂದ ಕಾಡುಕೋಳಿ ಅಥವಾ ಗ್ರೀಬ್‍ನಂತೆ ಕಾಣುತ್ತದೆ. ಇದು ಬಹಳ ಕಷ್ಟದಿಂದ ನಿಧಾನವಾಗಿ ಹಾರುತ್ತದೆ.

	ನೀರುಕೋಳಿಯ ಆಹಾರ ನೀರಿನಲ್ಲಿರುವ ಕೀಟಗಳು, ಕಾಳುಗಳು ಮತ್ತು ಚಿಕ್ಕ ಚಿಕ್ಕ ಪ್ರಾಣಿಗಳು. ಇದರ ಸಂತಾನಾಭಿವೃದ್ದಿ ಕಾಲ ಮಾರ್ಚಿ-ಜುಲೈ ತಿಂಗಳ ಅವಧಿ. ನೀರುಕೋಳಿ ಜೊಂಡುಗಳ ನಡುವೆ ಗೂಡುಕಟ್ಟಿ 5-8 ಮೊಟ್ಟೆಗಳನ್ನಿಡುತ್ತದೆ. ಮೊಟ್ಟೆಗಳ ಮೇಲೆ ನೇರಿಳೆ ಕೆಂಪು ಮಿಶ್ರಿತ ಕಂದುಬಣ್ಣದ ಕಲೆಗಳುಂಟು.
(ಎಂ.ಎನ್.ವಿಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ